ಉಪಾಂಶು
1. ರಹಸ್ಯ ಎಂಬ ಅರ್ಥದಲ್ಲಿ ಈ ಪದದ ಪ್ರಯೋಗವನ್ನು ಋಗ್ವೇದದಲ್ಲಿ ಕಾಣಬಹುದು (10;83.7.) ಮನುಸ್ಮøತಿಯ ಪ್ರಕಾರ ಇದು ಪ್ರಣವಾದಿ ತ್ರಿವಿಧ ಜಪಯಜ್ಞದ ಒಂದು ಬಗೆ. ಯತ್ಸಮೀಪಸ್ಥೋsಪಿ ಪರೋನಶೃಣೋತಿ ತದುಪಾಂಶು (ಯಾವುದು ಸಮೀಪದಲ್ಲಿದ್ದವರಿಗೂ ಕೇಳಿಸುವುದಿಲ್ಲವೋ ಅದೇ ಉಪಾಂಶು) ಎಂದು ಇದಕ್ಕೆ ವಿವರಣೆಯನ್ನು ಕೊಟ್ಟಿದ್ದಾರೆ. ಈ ಹೆಸರುಳ್ಳ ಜಪದ ಕ್ರಮ ಹೀಗಿದೆ.

ಜಿಹ್ವೋಷ್ಠೌ ಚಾಲಯೇತ್ ಕಿಂಚಿದ್ದೇವತಾಗತಮಾನಸಃ 
ನಿಜಶ್ರವಣಯೋಗ್ಯಃ ಸ್ಯಾದುಪಾಂಶುಃ ಸಜಪಃ ಸ್ಮøತಃ
ನಾಲಗೆ ತುಟಿಗಳನ್ನು ಸ್ವಲ್ಪ ಮಾತ್ರ ಚಲಿಸಿ, ಆಯಾ ದೇವತೆಯಲ್ಲಿ ಮಗ್ನವಾದ ಮನಸ್ಸಿನಿಂದ ಕೂಡಿ ತಾನು ಮಾತ್ರ ಆಲಿಸುವಷ್ಟು ಮಾಡಿದ ಜಪವೇ ಉಪಾಂಶು. ಉಪಾಂಶುಜಪ ವಾಚಿಕಜಪಕ್ಕಿಂತ ಹತ್ತರಷ್ಟೂ ಮಾನಸಿಕಜಪದ ಹತ್ತನೆಯ ಒಂದು ಭಾಗದಷ್ಟೂ ಫಲಪ್ರದವೆನಿಸಿದೆ. ಯಾಗಕಾಲದಲ್ಲಿ ಯುಜುರ್ವೇದ ಮಂತ್ರಗಳನ್ನು ಉಪಾಂಶುವಾಗಿ ಉಚ್ಚರಿಸಬೇಕೆಂದು ವಿಧಿ.

2. ಸೋಮದ ಆಹುತಿಯ ಒಂದು ಬಗೆ.
(ಬಿ.ಕೆ.ಎಸ್.; ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ